Saturday, May 9, 2009

ಗೆಣಸಿನ ಕಥೆ

ನಾವು ಬೆಂಗಳೂರಿನ ಸಂಜಯನಗರ ಕ್ಕೆ ೧೯೭೩ ರಲ್ಲಿ ಬಂದಾಗ ನನ್ನ ಮತ್ತು ನನ್ನ ತಂಗಿಯ ವಯಸ್ಸು ಸುಮಾರು ೭ ಮತ್ತು ೫. ಮನೆಯ ಸಮೀಪ ಶಾಲೆ ಇಲ್ಲದುದರಿಂದ ನಮ್ಮನ್ನು ನಮ್ಮ ತಾಯಿಯ ತವರೂರು ಕಾಸರಗೋಡಿನ ಸಮೀಪ ಇರುವ ಪುಣ್ಯ ಕ್ಷೇತ್ರ ಮಧೂರಿಗೆ ಕಳಿಸಲಾಯಿತು, ನನ್ನ ೨ ಮತ್ತು ೩ನೇ ತರಗತಿ ಮಧೂರಿನ ಸರಕಾರಿ ಶಾಲೆಯಲ್ಲಿ.

ಬಡತನದ ನಡುವೆಯೂ ನನ್ನ ಅಜ್ಜಿ, ಚಿಕ್ಕಮ್ಮಂದಿರು ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಆಗೆಲ್ಲ ಸಂಜೆಯ ತಿನಿಸು ಅವಲಕ್ಕಿ ಮಜ್ಜಿಗೆ, ಬೇಯಿಸಿದ ಸಿಹಿ ಗೆಣಸು ಇತ್ಯಾದಿ.

ಒಂದು ಸಂಜೆ, ಅಜ್ಜಿ ನಮ್ಮಿಬ್ಬರಿಗೂ ಬೇಯಿಸಿದ ಸಿಹಿ ಗೆಣಸು ಕೊಟ್ಟರು. ನಾನು ನೋಡಿ, ನನ್ನ ತಂಗಿಗಿಂತ ಹೆಚ್ಹು ಸಮಯ ತಿನ್ನುವ ಕಾರಣದಿಂದ ಮತ್ತು ಅವಳು ತಿನ್ನುವದನ್ನು ಮುಗಿಸಿದ ನಂತರ ಅವಳಿಗೆ ತೋರಿಸಿಕೊಂಡು ತಿನ್ನುವದಕ್ಕಾಗಿ, ಒಂದನ್ನು ತಿಂದು ಇನ್ನೊಂದು ಗೆಣಸು ಹಾಗೆ ಮುಚ್ಚಿ ಇಟ್ಟು ರಾತ್ರಿಯ ಊಟದ ನಂತರ, ನನ್ನ ದೊಡ್ಡ ಚಿಕ್ಕಮ್ಮ ಹಾಸಿಗೆ ಹಾಸಿದಾಗ, ಯಾರಿಗೂ ಕಾಣದ ಹಾಗೆ ನನ್ನ ತಲೆ ಸಮೀಪ ಇರಿಸಿ ಎಲ್ಲರು ಮಲಗಿದ ನಂತರ ತೋರಿಸಿ ತಿನ್ನುವ ಆಲೋಚನೆಯಲ್ಲಿ ಕಾಯುತ್ತಾ ಇದ್ದೆ.

ನಿಜ ಹೇಳುತ್ತೇನೆ, ನಿದ್ರೆಗೆ ಯಾವಾಗ ಜಾರಿದೆ ಎಂದು ಗೊತ್ತಿಲ್ಲ, ಬೆಳಿಗ್ಗೆ ಎದ್ದಾಗ ಎಲ್ಲರು ನನ್ನ ಮುಖ ನೋಡಿ ನಗುವಾಗ ಗಾಭರಿಯಿಂದ ಮುಖ ಸವರಿದೆ ನೋಡಿ! ನಾನು ಆಸೆಯಿಂದ ಇರಿಸಿದ ಗೆಣಸು ಮುಖಕ್ಕೆಲ್ಲ ಮೆತ್ತಿಕೊಂಡಿತ್ತು!